ಸಿನಿಕ ಪಂಥ-
	ಪುರಾತನ ಗ್ರೀಕ್‍ನಲ್ಲಿ ಹುಟ್ಟಿದ ಒಂದು ತತ್ತ್ವಪಂಥ. ಇದೊಂದು ನೀತಿ ಪಂಥ. ಏಂಟಿಸ್ಥೆನಿಸ್ ಎಂಬಾತ ಇದರ ಪ್ರಧಾನ ಆಚಾರ್ಯ. ನೀತಿ ನೀತಿಗಾಗಿ ಎನ್ನುವುದು ಇವನ ಸಿದ್ಧಾಂತ. ಚಲವಂತನಾದ ಮಾನವ ಮತ್ಯಾರಿಂದಲೂ ಏನನ್ನೂ ಬಯಸುವುದಿಲ್ಲ; ಸ್ವಾವಲಂಬಿಯಾಗಿರುತ್ತಾನೆ. ಎಲ್ಲ ಆಸೆಗಳನ್ನೂ ತ್ಯಜಿಸುವುದರಲ್ಲೇ ಆಸಕ್ತನಾಗಿರುತ್ತಾನೆ. ನಿರಪೇಕ್ಷನಾಗಿ ಬಾಳುತ್ತಾನೆ. ಅವನಿಗೆ ಸುಖದ ಬಯಕೆ ಇಲ್ಲ. ಅವನು ಖ್ಯಾತಿ, ಲಾಭ, ಪೂಜೆಗಳಿಗೆ ಆಸೆಮಾಡುವುದಿಲ್ಲ. ಇಂದ್ರಿಯಗಳಿಂದ, ಇಂದ್ರಿಯಾರ್ಥಗಳಿಂದ ತನ್ನ ಮನಸ್ಸನ್ನು ಸೆಳೆದುಕೊಂಡು ಅಂತರ್ಮುಖಿಯಾಗಿ ಬಾಳಲು ಬಯಸುತ್ತಾನೆ. ಅವನು ಆತ್ಮರತನಾಗುತ್ತಾನೆ, ಆತ್ಮಕಾಮನಾಗುತ್ತಾನೆ. ಇತರರ ಹಂಗಿಲ್ಲದೆ ಬದುಕುವುದನ್ನು ಕಲಿತಿರುತ್ತಾನೆ. ಹೀಗೆ ಸ್ವಸಂಪೂರ್ಣವಾಗಿ ಬಾಳುವಂಥವನು ಸಿನಿಕ ಎನಿಸಿಕೊಳ್ಳುತ್ತಾನೆ. ಸಿನಿಕ ಪಂಥದ ಕೆಲವು ಅಂಶಗಳನ್ನು ಸಾಕ್ರಟೀಸ್‍ನಲ್ಲಿ ಕಾಣುತ್ತೇವೆ. ಆದರೆ ಅನಂತರ ಬಂದ ಕೆಲವು ಸಿನಿಕರು ಈ ಮೂಲತತ್ತ್ವಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ.									
	(ಎಮ್.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ